ಕೇನೋಪನಿಷತ್ತು

ಪ್ರಸಿದ್ಧವಾದ ಉಪನಿಷತ್ತುಗಳಲ್ಲಿ ಒಂದು. ಸಾಮವೇದದ ತಲವಕಾರ ಬ್ರಾಹ್ಮಣಕ್ಕೆ ಅಥವಾ ಜೈಮಿನೀಯ ಬ್ರಾಹ್ಮಣಕ್ಕೆ ಸೇರಿದ್ದು. ಕೇನ ಎಂಬ ಪದ ಪ್ರಾರಂಭದ ಮಂತ್ರದಲ್ಲಿ ಮೊದಲನೆಯದಾಗಿರುವುದರಿಂದ ಈ ಉಪನಿಷತ್ತಿಗೆ ಕೇನೋಪನಿಷತ್ತು ಎಂಬ ಹೆಸರು ಬಂದಿದೆ. ಶಂಕರಾಚಾರ್ಯರ ಪ್ರಕಾರ ಇದು ತಲವಕಾರ ಬ್ರಾಹ್ಮಣದ ಒಂಬತ್ತನೆಯ ಅಧ್ಯಾಯ. ಬರ್ನಲ್ ಮತ್ತು ಹ್ಯಾನ್ಸ್ ಓರ್ಟೆಲ್ಲರು ಇದು ಜೈಮಿನೀಯ ಬ್ರಾಹ್ಮಣದ ನಾಲ್ಕನೆಯ ಅಧ್ಯಾಯದ ಹತ್ತನೆಯ ಅನುವಾಕ ಎಂದು ಅಭಿಪ್ರಾಯಪಡುತ್ತಾರೆ. ಇದು ಗದ್ಯ ಪದ್ಯರೂಪದ ಬೃಹದಾರಣ್ಯಕ, ಛಾಂದೋಗ್ಯ, ತೈತ್ತಿರೀಯ, ಐತರೇಯ, ಕೌಷೀತಕೀಗಳ ಗುಂಪಿಗೆ ಸೇರಿದ್ದು. ಆದ್ದರಿಂದ ಅತಿ ಪ್ರಾಚೀನವಾದುದು. ಸಾಂಪ್ರದಾಯಿಕವಾಗಿ ಈಶಾವಾಸ್ಯದ ಅನಂತರ ಬರುತ್ತದೆ. ಇದಕ್ಕೆ ಪ್ರಸಿದ್ಧವಾದ ಎರಡು ಅದ್ವೈತಭಾಷ್ಯಗಳಿವೆ. ಒಂದಕ್ಕೆ ಪದಭಾಷ್ಯವೆಂದೂ ಇನ್ನೊಂದಕ್ಕೆ ವಾಕ್ಯಭಾಷ್ಯವೆಂದೂ ಹೆಸರು. ಇವೆರಡೂ ಶಂಕರಾಚಾರ್ಯಕೃತವೆಂದು ಹೇಳಲಾಗಿದೆಯಾದರೂ ಪದಭಾಷ್ಯ ಮಾತ್ರ ಅದರದೇ ಎಂದು ಖಚಿತವಾಗಿ ತಿಳಿದಿದೆ.

	ನಾಲ್ಕು ಖಂಡಗಳನ್ನು ಒಳಗೊಂಡಿರುವ ಈ ಉಪನಿಷತ್ತು ಪರಬ್ರಹ್ಮ ವಿಷಯಕವಾದದ್ದು. ಮೊದಲ ಖಂಡದಲ್ಲಿ ಪರಬ್ರಹ್ಮ ಅತೀಂದ್ರಿಯ ವಸ್ತುವೆಂದೂ ಜಡವಾದ ಇಂದ್ರಿಯಗಳ ಚೇತನತ್ವ ಅದರಿಂದಲೇ ಉಂಟಾಗಿದೆಯೆಂದೂ ಅದರ ಸ್ವರೂಪವನ್ನು ಪ್ರಮಾಣಗಳಿಂದ ಇತರರಿಗೆ ಉಪದೇಶಿಸುವುದು ಅಸಾಧ್ಯವೆಂದೂ ತಿಳಿಸಲಾಗಿದೆ. ಬ್ರಹ್ಮವನ್ನು ಹೇಗೆ ಅರಿಯಬಹುದು ಎಂಬ ಪ್ರಶ್ನೆಗೆ ಎರಡನೆಯ ಖಂಡ ಉತ್ತರ ಕೊಡುತ್ತದೆ. ಯಾವನು ತಾನು ಚೆನ್ನಾಗಿ ತಿಳಿದಿರುತ್ತೇನೆ ಎಂದು ಎಣಿಸಿರುವುದಿಲ್ಲವೋ ತಿಳಿದಿದ್ದೇನೆ ಎಂಬ ಜ್ಞಾನ ಯಾವನಿಗೆ ಇರುತ್ತದೆಯೋ ಅವನೇ ಅದನ್ನು ಅರಿತಿರುತ್ತಾನೆ. ತಿಳಿದವರಿಗೆ ಅದು ತಿಳಿದಿಲ್ಲ. ತಿಳಿಯದವರಿಗೆ ಅದು ತಿಳಿದಿದೆ. ಚೆನ್ನಾಗಿ ಅರಿತಿದ್ದೇನೆ ಎಂದು ಯಾರೂ ಹೇಳಲಾಗುವುದಿಲ್ಲ. ಇಂದ್ರಿಯಗಳಿಗೆ ವಿಷಯವಾಗದಿದ್ದರೂ ಬ್ರಹ್ಮ ಪ್ರತ್ಯಗಾತ್ಮನೆಂದು ಇದರ ಭಾವ. ಆತ್ಮತತ್ತ್ವವನ್ನು ಅರಿತುಕೊಂಡ ವಿವೇಕಿಗಳು ಅಮೃತರಾಗುತ್ತಾರೆ. ಅರಿತುಕೊಳ್ಳದಿದ್ದರೆ ವಿನಾಶವಾಗುತ್ತಾರೆ. ಮೂರನೆಯ ಖಂಡದಲ್ಲಿ ದೇವತೆಗಳ ಗರ್ವಭಂಗಕ್ಕಾಗಿ ಬ್ರಹ್ಮ ಯಕ್ಷ ರೂಪದಿಂದ ಅಗ್ನಿವಾಯುಗಳಿಗೆ ಕಾಣಿಸಿಕೊಂಡ ಆಖ್ಯಾಯಿಕೆ ಇದೆ. ಅವರು ಈ ಯಕ್ಷನನ್ನು ಅರಿಯಲಿಲ್ಲ. ಇಂದ್ರನಿಗೆ ಮಾತ್ರ ಉಮಾ ಹೈಮವತಿಯ ದರ್ಶನವಾದ ಮೇಲೆ ಅದು ಬ್ರಹ್ಮವೆಂದು ತಿಳಿಯಿತು. ಬ್ರಹ್ಮವಿದ್ಯೆಯ ಸ್ತುತಿಗಾಗಿಯೂ ಬ್ರಹ್ಮದ ಅಸ್ತಿತ್ವವನ್ನು ಪ್ರತಿಪಾದಿಸುವುದಕ್ಕಾಗಿಯೂ ಈ ಆಖ್ಯಾಯಿಕೆಯನ್ನು ಹೇಳಿದ. ಈ ದೃಷ್ಟಿಯಿಂದ ಈ ಖಂಡಕ್ಕೂ ಮುಂದಿನ ಖಂಡಕ್ಕೂ ಸಂಬಂಧವಿದೆ. ಕೊನೆಯದಾದ ನಾಲ್ಕನೆಯ ಖಂಡ ಕೇನೋಪಷತ್ತಿನ ಪರಮರಹಸ್ಯವನ್ನೊಳಗೊಂಡಿರುವುದರಿಂದ ಅತ್ಯಂತ ಮುಖ್ಯ ಖಂಡವೆಂದು ಹೇಳಲಾಗಿದೆ. ಉಮಾ ಹೈಮವತಿ ಇಂದ್ರನಿಗೆ ಉಪಮಾನಗಳ ಮೂಲಕ ಬ್ರಹ್ಮವಿದ್ಯೆಯನ್ನು ಉಪದೇಶಿಸುತ್ತಾಳೆ. ಮಿಂಚಿನ ಹೊಳಪಿನಂತೆ, ಕಣ್ಣು ಮಿಟುಕಿಸಿದಂತೆ ಬ್ರಹ್ಮ ಕ್ಷಿಪ್ರವಾಗಿ ತೋರಿಸಿಕೊಂಡು ಮಾಯವಾಗುತ್ತದೆ ಎಂಬ ಉಪಮಾನ ಇಲ್ಲಿ ಇದೆ. ಮುಂದಿನ ಮಂತ್ರಕ್ಕೆ ಪ್ರಾಚ್ಯ ಭಾಷ್ಯಕಾರರೂ ಪಾಶ್ಚಾತ್ಯ ಅನುವಾದಕರೂ ನಾನಾ ವಿಧವಾಗಿ ಅರ್ಥವನ್ನು ಕಲ್ಪಿಸಿರುತ್ತಾರೆ. ಬ್ರಹ್ಮತತ್ತ್ವ ಮನಸ್ಸಿನ ಪ್ರತ್ಯಯಗಳೊಂದಿಗೆ ತೋರುವ ಸ್ವಭಾವವುಳ್ಳದ್ದೆಂದು ಶಂಕರಾಚಾರ್ಯರೂ ಮನಸ್ಸಿನಿಂದ ಬ್ರಹ್ಮವನ್ನು ವಿಷಯೀಕರಿಸಲು ಸಾಧ್ಯವಿಲ್ಲವೆಂದು ರಂಗರಾಮಾನುಜರೂ ಅರ್ಥ ಮಾಡುತ್ತಾರೆ. ಏನೇ ಆಗಲಿ ಮನಸ್ಸು ಬ್ರಹ್ಮನ ಬಳಿಗೆ ಹೋಗುತ್ತದೆ ಎಂಬುದು ಸ್ಪಷ್ಟ. ಇಲ್ಲರೂ ಬ್ರಹ್ಮವನ್ನು ಪ್ರೀತಿಸುವುದರಿಂದ ಬಯಸುವುದರಿಂದ ಅದನ್ನು ತದ್ವನ ಅಥವಾ ವನದಿಂದ (ಉತ್ಕಟಾಭಿಲಾಷೆ) ಉಪಾಸಿಸಬೇಕೆಂಬುದೇ ಕೇನೋಪನಿಷತ್ತಿನ ಪರಮರಹಸ್ಯ. ಪ್ರತ್ಯಕ್ಷಾದಿ ಪ್ರಮಾಣಗಳಿಂದ ತಿಳಿಸಿಕೊಡಲಾಗದ ಬ್ರಹ್ಮವನ್ನು ಆಗಮದಿಂದಲೂ ತದ್ವನದಿಂದ ತಿಳಿಯಬಹುದೆಂದೂ ತಪಸ್ಸು, ದಮ, ಕರ್ಮಗಳು ಅದಕ್ಕೆ ಪ್ರತಿಷ್ಠೆಯೆಂಬುದೂ ಈ ಉಪನಿಷತ್ತಿನ ಸಾರಾಂಶ. (ನೋಡಿ- ಉಪನಿಷತ್ತುಗಳು)    						
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ